ಅನಂತಸ್ಪರ್ಶಕ
	
ವಕ್ರರೇಖೆ ಮತ್ತು ಅದರ ಸ್ಪರ್ಶಕಗಳು ಪರಸ್ಪರ ಅನಂತದಲ್ಲಿ ಸ್ಪರ್ಶಿಸಿದಾಗ ಆ ಸ್ಪರ್ಶಕದ ಹೆಸರು (ಅಸಿಮ್‍ಟೋಟ್).
	
ಟಿ ಘಾತದ (ಡಿಗ್ರಿ) ಒಂದು ಸಮತಳವಕ್ರರೇಖೆ ಅನಂತಸರಳರೇಖೆಯನ್ನು ಟಿ ಬಿಂದುಗಳಲ್ಲಿ ಛೇದಿಸುತ್ತದೆ. ಈ ಬಿಂದುಗಳಲ್ಲಿನ ಸ್ಪರ್ಶಕಗಳೇ ಅನಂತ ಸ್ಪರ್ಶಕಗಳು. ಇಂಥ ಬಿಂದು ಕೆಲವು ವಿಶೇಷ ಸಂದರ್ಭದಲ್ಲಿ ದ್ವಿಗುಣಬಿಂದು (ಡಬ್ಬಲ್ ಪಾಯಿಂಟ್) ಆಗಿರಬಹುದು. ಹೀಗಾದಾಗ ವಕ್ರರೇಖೆಗೆ ಎರಡು ಸಮಾನಾಂತರ ಅನಂತಸ್ಪರ್ಶಕಗಳು ಲಭಿಸುತ್ತದೆ.
	
ಶಂಕುಜಗಳ (ಕಾನಿಕ್ಸ್) ಪೈಕಿ, ಅತಿಪರವಲಯಕ್ಕೆ (ಹೈಪರ್‍ಬೊಲ) ಎರಡು ಅನಂತಸ್ಪರ್ಶಕಗಳಿವೆ. ಇವು ಅತಿಪರವಲಯದ ಕೇಂದ್ರದಲ್ಲಿ ಸಂಧಿಸುತ್ತವೆ. ದೀರ್ಘವೃತ್ತಕ್ಕೆ (ಎಲಿಪ್ಸ್) ಅನಂತಸ್ಪರ್ಶಕಗಳು ಊಹ್ಯ. ಪರವಲಯ (ಪ್ಯರಾಬೊಲ) ಅನಂತಸರಳರೇಖೆಯನ್ನು ಸ್ಪರ್ಶಿಸುವುದರಿಂದ, ಈ ರೇಖೆಯೇ ಅದರ ಅನಂತಸ್ಪರ್ಶಕವಾಗುತ್ತದೆ. ಶಂಕುಜಗಳಲ್ಲಿ ಕೇಂದ್ರಬಿಂದುವಿನಿಂದ ಎಳೆದ ಸ್ಪರ್ಶಕಗಳೇ ಅನಂತಸ್ಪರ್ಶಕಗಳು.					(ಸಿ.ಎನ್.ಎಸ್.)
	
ಅನಂತಸ್ಪರ್ಶಕೀಯವಾಗಿ (ಅಸಿಮ್‍ಟಾಟಿಕಲೀ) ಅಂದರೆ ಸ್ಪರ್ಶಿಸುವಂತೆ ತೋರುವ ಆದರೆ ಎಷ್ಟು ಮುಂದುವರಿದರೂ ಸ್ಪರ್ಶಿಸದ ಎಂಬ ರೂಢಿಯ ಅರ್ಥ ಅನಂತಸ್ಪರ್ಶಕದಿಂದ ಬಂದಿದೆ.							